Friday, April 10, 2020

ಹಿರಿಯ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ
ಹಿರಿಯ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ ಅವರ ನಿಧನ ಕನ್ನಡ ಪತ್ರಿಕಾ ಛಾಯಾಗ್ರಹಣ ಕ್ಷೇತ್ರಕ್ಕೆ ಅಪಾರ ನಷ್ಟ ತಮದುಕೊಟ್ಟಿದೆ ಎಂದೇ ನನ್ನ ಭಾವನೆ. ಸುಮಾರು 40 ವರ್ಷಗಳಿಂದ ನಾನು ಅವರ ಪ್ರೀತಿಗೆ ಪಾತ್ರನಾಗಿದ್ದೆ. ನಾನು ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಅವರ ಒಡನಾಟ ಹೆಚ್ಚಿತ್ತು. ಒಂದು ವಿಸ್ಮಯ ಎಂದರೆ ಬೆಂಗಳೂರು ನಗರ ಪಾಲಿಕೆಯ ಮೊದಲ ಮೇಯರ್ ಇಂದ ಆರಂಭಿಸಿ ಬಹುಶಃ ಇತ್ತೀಚಿನ ಮೇಯರ್ ಅಧಿಕಾರಗ್ರಹಣ ಮಾಡಿದ ಸಮಾರಂಭಗಳನ್ನು ಅವರು ತಮ್ಮ ಕ್ಯಾಮರದಲ್ಲಿ ಕ್ಲಿಕ್ಕಿಸಿದ್ದರು. ಅವರಿಗೆ ಈಗ 89 ವಯಸ್ಸು. ನಗರ ಪಾಲಿಕೆಯ ಅಧಿಕೃತ ಛಾಯಾಗ್ರಾಹಕರಾಗಿದ್ದರು. ನಾನು ಅಲ್ಲಿ ಪಿ.ಆರ್.ಒ ಇದ್ದಾಗ ಸಾವಿರಾರು ರೂಪಾಯಿ ಹಳೇ ಬಿಲ್ ಪಡೆಯಲಾರದೆ ಪರಿತಪಿಸುತ್ತಿದ್ದರು. ನನ್ನ ಅವಧಿಯಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಂಡು ಆಯುಕ್ತರ ಬಳಿ ದುಂಬಾಲು ಬಿದ್ದು ಅವರ ಬಿಲ್ ಕ್ಲಿಯರ್ ಮಾಡಿಸಿದ್ದೆ. ಸ್ವಾತಂತ್ರ್ಯಪೂರ್ವದಿಂದ ಅವರ ಛಾಯಾಗ್ರಹಣ ವೃತ್ತಿ ಆರಂಭವಾಗಿತ್ತು. ಲಕ್ಷಾಂತರ ನೆಗಿಟೀವ್’ಗಳನ್ನು ಸಂರಕ್ಷಿಸಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಅವರಿಂದ ಫೋಟೋಗಳನ್ನು ಪಡೆದಿದ್ದೆ. ಈಗ ನಾನು ದಯಾನಂದ ಸಾಗರ್ ಅವರ ಆತ್ಮಚರಿತ್ರೆ ಬರೆಯುತ್ತಿದ್ದು ಕೆಲವು ತಿಂಗಳ ಹಿಂದೆ ರಾಮಸ್ವಾಮಿ ಅವರಿಗೆ ಫೋನ್ ಮಾಡಿ ಫೋಟೋ ದಯಪಾಲಿಸುವಂತೆ ಕೇಳಿದ್ದೆ. “ಪ್ರಹ್ಲಾದ್ ನಿಮಗೆ ಗೊತ್ತಿಲ್ಲವಾ, ನನ್ನ ಎಲ್ಲ ನೆಗೆಟೀವ್ಸ್ ಪ್ರಜಾವಾಣಿಗೆ ಕೊಟ್ಟುಬಿಟ್ಟೆನಲ್ಲ” ಎಂದಿದ್ದರು. ನನಗೆ ಗೊತ್ತಿತ್ತು. ನಾನು ಬಿಎಂಎಸ್ ಶಿಕ್ಷಣ ಸಂಸ್ಥೆಗಳ ಪಿ.ಆರ್.ಒ ಆಗಿದ್ದಾಗ ಆ ಸಂಸ್ಥೆಯನ್ನು ಕುರಿತು ಕಾಫಿಟೇಬಲ್ ಬುಕ್ ಮಾಡಿದ್ದೆ. ಬಿಎಂಎಸ್ ಕಾಲೇಜಿನಲ್ಲಿಯೇ ಎಂಜನಿಯರಿಂಗ್ ವ್ಯಾಸಂಗ ಮಾಡಿದ್ದ ರಾಮಸ್ವಾಮಿಯವರನ್ನು ಆಗಲೂ ಫೋಟೋ ಕೇಳಿದ್ದೆ. ಅದೇ ಉತ್ತರ ಹೇಳಿದ್ದರು. ಅವರು ತೆಗೆದಿರುವ ಲಕ್ಷಾಂತರ ಅಭೂತಪೂರ್ವ ನೆಗೆಟೀವ್ ಈಗಲೂ ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್ ಬಳಿ ಇದೆ. ಕೆಲವು ವರ್ಷಗಳು ಅವರ ಫೋಟೋಗಳನ್ನು ಬಳಸಿ ಪ್ರಜಾವಾಣಿ ಸುದ್ದಿಚಿತ್ರಗಳನ್ನು ಮಾಡುತ್ತಿತ್ತು. ನನ್ನ 60ನೆ ವರ್ಷದ ಸಂದರ್ಭದಲ್ಲಿ ಗೆಳೆಯರು ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನದ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು. ನಾನು ರಾಮಸ್ವಾಮಿ ಅವರಿಗೆ ಹೇಳೇ ಇರಲಿಲ್ಲ. ನನ್ನ ಮೇಲಿನ ಪ್ರೀತಿಯಿಂದ ಸಂಜೆ ಸಚಿವರಾದ ಶ್ರೀ ಅನಂತಕುಮಾರ್ ಅವರು ಬರುವ ಮೊದಲೆ ಕಲಾಕ್ಷೇತ್ರಕ್ಕೆ ಬಂದು ಕಾದು ಕುಳಿತು ಫೋಟೊ ತೆಗೆದು, ನಂತರ ಸಾಫ್ಟ್ ಕಾಪಿ ಕೊಟ್ಟಿದ್ದರು. ಸರಳ ವ್ಯಕ್ತಿ, ನಿಗರ್ವಿ, ತುಂಬಿದ ಕೊಡ ತುಳುಕದಂತಹ ಸ್ವಭಾವ. ಗಾಯಕ ಸಿ. ಅಶ್ವತ್ಥ್ ಅವರ ಬೀಗರು. ಕೆಲವು ದಿನಗಳ ಹಿಂದಷ್ಟೇ ನಿಧನರಾದ ಮತ್ತೊಬ್ಬ ಹಿರಿಯ ಛಾಯಾಗ್ರಾಹಕ ಟಿ.ಎಲ್.ಪ್ರಭಾಕರ್ ಅವರ ಅಣ್ಣ. ರಾಮಸ್ವಾಮಿ ಅವರ ಆತ್ಮಕ್ಕೆ ಶಾಂತಿ ದೊರಕಲಿ

No comments:

Post a Comment