ಪಾಟೀಲ ಪುಟ್ಟಪ್ಪನವರಿಗೆ ಅಂತಿಮ ನಮನ
ಬಹುಶಃ 1988-89 ಇರಬಹುದು. ಅಭಿಮಾನಿ ಪ್ರಕಾಶನದ ಮೂಲಕ ಟಿ.ವೆಂಕಟೇಶ್ 1984ರಿಂದ ‘ಅಭಿಮಾನಿ’ ವಾರಪತ್ರಿಕೆ ಪ್ರಕಟಿಸುತ್ತಿದ್ದರು. ಜಾಣಗೆರೆ ವೆಂಕಟರಾಮಯ್ಯನವರು ಪತ್ರಿಕೆಯ ಸಂಪಾದಕರಾಗಿದ್ದರು. ವೈಚಾರಿಕ ಬರಹಗಳು, ಕನ್ನಡಪರ ಜಾಗೃತಿ ಮುಂತಾದ ಅನ್ವೇಷಕ ಬರಹಗಳಿಂದ ಅಭಿಮಾನಿ ನಾಡಿನಾದ್ಯಂತ ಪ್ರಖ್ಯಾತವಾಗಿತ್ತು. ಪಾಟೀಲ ಪುಟ್ಟಪ್ಪನವರ ಬಗ್ಗೆ ಪತ್ರಿಕೆಯಲ್ಲಿ ಬಂದ ಲೇಖನವೊಂದರಿಂದ ಪಾಪು ಕೆಂಡಾಮಂಡಲವಾಗಿದ್ದರು. ಹುಬ್ಬಳ್ಳಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕಾಶಕ ಟಿ.ವೆಂಕಟೇಶ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದರು. ಟಿ.ವೆಂಕಟೇಶ್ ಅವರು ನ್ಯಾಯಾಲಯದಿಂದ ಜಾಮೀನು ಪಡೆದರು. ಹಲವು ವರ್ಷ ನ್ಯಾಯಾಲಯದಲ್ಲಿ ಪ್ರಕರಣ ಎಳೆಯುತ್ತಾ ಹೋಯಿತು. ಆ ವೇಳೆಗೆ ಪಾಟೀಲ ಪುಟ್ಟಪ್ಪನವರ ಪ್ರಪಂಚಕ್ಕೆ ಬರೆಯುತ್ತಿದ್ದ ಅಬ್ದುಲ್ ಹಕೀಂ ಅಭಿಮಾನಿ ಬಳಗ ಸೇರಿಕೊಂಡಿದ್ದರು. ಹಲವು ಹಿಯರಿಂಗ್ ತಪ್ಪಿಸಿಕೊಂಡ ಕಾರಣಕ್ಕೆ ಟಿ.ವೆಂಕಟೇಶ್ ಅವರಿಗೆ ಜಾಮೀನುರಹಿತ ವಾರೆಂಟ್ ನೀಡಲಾಗಿತ್ತು. ಈ ಮೊಕದ್ದಮೆ ವಾಪಸ್ ಪಡೆಯಲು ಪಾಪು ಬಳಿ ಅಬ್ದುಲ್ ಹಕೀಂ ಮಾತುಕತೆ ನಡೆಸಿದರು. ಮೊಕದ್ದಮೆ ಹಿಂದಿನ ದಿನ ರಾತ್ರಿ ಟಿ.ವೆಂಕಟೇಶ್, ಅಬ್ದುಲ್ ಹಕೀಂ ಹಾಗೂ ನಾನು ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್ಸು ಹತ್ತಿ ಬೆಳ್ಳಂಬೆಳಗ್ಗೆ ಹುಬ್ಬಳ್ಳಿ ತಲುಪಿದೆವು. ಹೊಟೆಲ್ನಲ್ಲಿ ರೂಂ ಮಾಡಿ ಬೇಗನೆ ಸಿದ್ದವಾಗಿ, ಆಟೋ ಹತ್ತಿ ಬೆಳಗ್ಗೆ 7.15ಕ್ಕೆ ಪಾಟೀಲ ಪುಟ್ಟಪ್ಪನವರ ಮನೆ ತಲುಪಿದೆವು. ಅಂದು ಆ ವಾರದ ಪ್ರಪಂಚ ವಾರಪತ್ರಿಕೆ ಮುದ್ರಣಕ್ಕೆ ಹೋಗುವ ದಿನ. ವರಾಂಡದಲ್ಲಿ ಮೊದಲ ಮಹಡಿಗೆ ಹೋಗುವ ಪಾವಟಿಗೆಯ ಬದಿ, ಸಣ್ಣ ಮೇಜಿಗೆ ಆತು ಕುಳಿತು ಚೂರು ಚೂರು ಕಾಗದಗಳ ಮೇಲೆ ಲೇಖನಗಳು, ಸಂಪಾದಕೀಯ ಬರೆಯುವುದರಲ್ಲಿ ಪಾಪು ನಿರತರಾಗಿದ್ದರು. ಬನ್ನಿ ಎಂದವರೆ, ನಮ್ಮನ್ನು ಕೂಡಲು ಹೇಳಿ, ಚಹಾ ಕೊಡುವಂತೆ ತಿಳಿಸಿ, ಬರೆಯುವುದರಲ್ಲಿ ಮಗ್ನರಾದರು. ಬರೆಯುವುದನ್ನು ತಪಸ್ಸಿನಂತೆ ಕಾಣುತ್ತಿದ್ದರು ಪಾಪು. ಸುಮಾರು ಒಂದು ಗಂಟೆ ಕಾಲ ನಮ್ಮನ್ನು ಮಾತನಾಡಿಸಲಿಲ್ಲ. ನಾವು ಪ್ರಪಂಚ, ವಿಶ್ವವಾಣಿ, ಸಂಯುಕ್ತಕರ್ನಾಟಕ ತಿರುಗಿಸುತ್ತಾ ಕುಳಿತೆವು. ಬರೆದದ್ದೆಲ್ಲ ಮುಗಿಸಿ, ನಮ್ಮತ್ತ ತಿರುಗಿದರು. ಅಭಿಮಾನಿ ಸಹ ಕನ್ನಡಪರ ಕಳಕಳಿಯೊಂದಿಗೆ ಕೆಲಸ ಮಾಡುತ್ತಿದೆ, ಅಚಾನಕವಾಗಿ ಲೇಖನ ಪ್ರಕಟವಾಗಿದೆ, ದಯಮಾಡಿ ಮೊಕದ್ದಮೆ ವಾಪಸ್ಸು ಪಡೆಯಿರಿ ಎಂದು ನಿವೇದಿಸಿಕೊಂಡೆವು. ಆ ಬಗ್ಗೆ ತಮ್ಮ ಉತ್ತರವನ್ನು ಕಾದಿರಿಸಿ, ಕನ್ನಡಪರ ಹೋರಾಟದ ವಿಷಯ ಮಾತನಾಡಿದರು. ಡಾ.ರಾಜಕುಮಾರ್ ಅವರ ಕನ್ನಡ ಭಾಷೆಯ ಹೋರಾಟದ ವಿಷಯವೂ ಪ್ರಸ್ತಾಪವಾಯಿತು. ಮಾತನ್ನು ಮುಗಿಸುವ ಮುನ್ನ 10 ಗಂಟೆ ವೇಳೆಗೆ ಚೆನ್ನಮ್ಮ ವೃತ್ತದ ಬಳಿ ಇರುವ ತಮ್ಮ ಕಚೇರಿಗೆ ಬರಲು ಹೇಳಿದರು. ನಾವು ಹೊರ ಬಂದು ತಿಂಡಿ ಮುಗಿಸಿ ಕಚೇರಿಗೆ ಬಂದೆವು. ಆ ವೇಳೆಗೆ ಅವರ ವಕೀಲರು ಅಲ್ಲಿದ್ದರು. ಪಾಪು ಮುಂಚಿತವಾಗಿಯೇ ಬಂದು, ಪತ್ರಿಕೆಯನ್ನು ಸಿದ್ಧಪಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಮೊಕದ್ದಮೆ ಹಿಂದಕ್ಕೆ ಪಡೆಯುವ ಪ್ರಕ್ರಿಯೆಗಳನ್ನು ಅವರ ವಕೀಲರು ಮುಗಿಸಿದರು. ಎಲ್ಲೆಡೆ ಸಹಿ ಹಾಕಿದ ಪಾಪು, ನಮ್ಮನ್ನು ಆತ್ಮೀಯವಾಗಿ ಬೀಳ್ಕೊಟ್ಟರು. ನಾವು ನ್ಯಾಯಾಲಯಕ್ಕೆ ಬಂದು, ನಮ್ಮ ಕೇಸು ಬರುವವರೆಗೂ ಕಾದು, ನಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿ, ಎಲ್ಲವನ್ನು ಮುಗಿಸಿದಾಗ ಸಂಜೆ ಸಮೀಪಿಸುತ್ತಿತ್ತು.
ಪಾಟೀಲ ಪುಟ್ಟಪ್ಪನವರದು ಮೃದು ಹೃದಯ, ಅದು ಭಾಷೆಗಾಗಿ ಸದಾ ಮಿಡಿಯುತ್ತಿತ್ತು. ಅವರ ಆತ್ಮಕ್ಕೆ ಕನ್ನಡ ಭುವನೇಶ್ವರಿ ಶಾಂತಿ ನೀಡಲಿ.
-ಅ.ನಾ.ಪ್ರಹ್ಲಾದರಾವ್
ಪಾಟೀಲ ಪುಟ್ಟಪ್ಪನವರದು ಮೃದು ಹೃದಯ, ಅದು ಭಾಷೆಗಾಗಿ ಸದಾ ಮಿಡಿಯುತ್ತಿತ್ತು. ಅವರ ಆತ್ಮಕ್ಕೆ ಕನ್ನಡ ಭುವನೇಶ್ವರಿ ಶಾಂತಿ ನೀಡಲಿ.
-ಅ.ನಾ.ಪ್ರಹ್ಲಾದರಾವ್
No comments:
Post a Comment